ಜಾನಪದ ವಿಶ್ವವಿದ್ಯಾಲಯವು ಈ ಮುಂದಿನ ಧ್ಯೇಯೋದ್ದೇಶಗಳನ್ನು ಹೊಂದಿರತಕ್ಕದ್ದು, ಎಂದರೆ:-
1. ಕರ್ನಾಟಕದ ಜನಪದ ಸಾಹಿತ್ಯ, ಕಲೆ, ಸಂಗೀತ, ರಂಗಭೂಮಿ, ಕರಕುಶಲಕಲೆ, ಜನಪದ ವೈದ್ಯಪದ್ಧತಿ, ಆಹಾರ ಪಾನೀಯ, ಗುಡಿಕೈಗಾರಿಕೆ ಮೊದಲಾದ ಎಲ್ಲ ವಿಷಯಗಳನ್ನು ಒಳಗೊಂಡ ಕ್ಷೇತ್ರಗಳಲ್ಲಿ ಉನ್ನತ ಶಿಕ್ಷಣ ಮತ್ತು ಸಂಶೋಧನೆಗೆ ಅವಕಾಶವನ್ನು ಕಲ್ಪಿಸುವುದು;
2. ಕನ್ನಡ ಹಾಗೂ ಇತರ ದ್ರಾವಿಡ ಭಾಷೆಗಳನ್ನು ಮಾತನಾಡುವ ಜನರ ಮತ್ತು ಇತರ ಭಾಷೆಗಳನ್ನು ಮಾತನಾಡುವ ಜನರ ಸಂಸ್ಕೃತಿ ಅಧ್ಯಯನಕ್ಕೆ ಅವಕಾಶ ಕಲ್ಪಿಸುವುದು;
3. "ದೇಶೀಯವು ಏಕ ಅಲ್ಲ; ಅದು ಅನೇಕ" ಎಂಬ ಸ್ಪಷ್ಟ ತಿಳಿವಳಿಕೆಯೊಂದಿಗೆ ದೇಶೀಯ ಸಾಂಪ್ರದಾಯಿಕ ಜ್ಞಾನ ಪರಂಪರೆಗಳ ಅಧ್ಯಯನಕ್ಕೆ ಅವಕಾಶವನ್ನು ಕಲ್ಪಿಸುವುದು;
4. ಕರ್ನಾಟಕದ ಎಲ್ಲ ಅಲಕ್ಷಿತ ಗ್ರಾಮೀಣ ಸಮುದಾಯಗಳ ಹಾಗೂ ಬುಡಕಟ್ಟುಗಳ ಅಭಿವೃದ್ಧಿಗೆ ನೆರವಾಗುವುದು;
5. ಜಾಗತೀಕರಣದ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ದೇಶೀಯ ಸಂಸ್ಕೃತಿಗಳನ್ನು ಬಲಪಡಿಸುವುದು;
6. ವಿಶ್ವದಲ್ಲಿಯೇ ಇದು ಮೊದಲ ಜಾನಪದ ಅಧ್ಯಯನ ವಿಶ್ವವಿದ್ಯಾಲಯವಾಗಿರುವುದರಿಂದ ಎಲ್ಲ ದೇಶಗಳಿಗೆ, ಅದರಲ್ಲೂ ವಿಶೇಷವಾಗಿ, ಅಭಿವೃದ್ಧಿಶೀಲ ದೇಶಗಳಿಗೆ ಮಾದರಿಯಾಗುವಂಥ ರೀತಿಯಲ್ಲಿ ಈ ವಿಶ್ವವಿದ್ಯಾಲಯವನ್ನು ರೂಪಿಸುವುದು;
7. ಕರ್ನಾಟಕದ ವಿವಿಧ ಪ್ರದೇಶಗಳಲ್ಲಿಯ ಎಲ್ಲ ಸಮುದಾಯಗಳ ಜಾನಪದವನ್ನು ವಿಸ್ತೃತ ಕ್ಷೇತ್ರಕಾರ್ಯದ ಮೂಲಕ ವೈಜ್ಞಾನಿಕವಾಗಿ ಸಂಗ್ರಹಿಸಿ, ಸಂಪಾದಿಸಿ ಪ್ರಕಟಿಸುವುದು;
8. ಸಂಗ್ರಹಿಸಿದ ಜಾನಪದ ಸಾಮಗ್ರಿಯನ್ನು ವ್ಯವಸ್ಥಿತ ರೂಪದಲ್ಲಿ ಡಿಜಿಟಲ್ ವಿಧಾನದಿಂದ ಬಹುಮುಖೀ ದಾಖಲೀಕರಣವನ್ನು ಕೈಗೊಂಡು ಅದನ್ನು ಸಂರಕ್ಷಿಸುವುದು;
9. ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಲಭ್ಯವಾಗುವ ಗ್ರಾಮೀಣ ಹಾಗೂ ಬುಡಕಟ್ಟು ಜೀವನದಲ್ಲಿ ಬಳಕೆಯಲ್ಲಿರುವ ವಸ್ತುಗಳನ್ನು, ಅವು ಕಣ್ಮರೆಯಾಗುವ ಮೊದಲೇ ಸಂಗ್ರಹಿಸುವುದು ಮತ್ತು ಅವುಗಳನ್ನು ಒಳಾಂಗಣ ಹಾಗೂ ಬಯಲು ವಸ್ತು ಸಂಗ್ರಹಾಲಯಗಳಲ್ಲಿ ವ್ಯವಸ್ಥಿತವಾಗಿ ಪ್ರದರ್ಶನ ಮಾಡುವುದು ಹಾಗೂ ಆ ಸ್ಥಳಗಳನ್ನು ಪ್ರವಾಸಿ ಆಕರ್ಷಣೆಯ ತಾಣಗಳನ್ನಾಗಿ ರೂಪಿಸುವುದು;
10. ಶಾಲೆ, ಕಾಲೇಜು ಹಾಗೂ ಉನ್ನತ ಶಿಕ್ಷಣಕೇಂದ್ರಗಳಲ್ಲಿ ಜಾನಪದವನ್ನು ಒಂದು ಕಲಿಕೆಯ ವಿಷಯವಾಗಿ ಅಳವಡಿಸುವುದು ಹಾಗೂ ವಿಶ್ವವಿದ್ಯಾಲಯದ ಮಟ್ಟದಲ್ಲಿ ಸಂಶೋಧನೆ ನಡೆಸಲು ಅವಕಾಶವನ್ನು ಮಾಡಿಕೊಟ್ಟು ಪದವಿಗಳನ್ನು ಪ್ರದಾನ ಮಾಡುವುದು. ಹಾಗೆಯೇ ದೂರಶಿಕ್ಷಣದ ಮೂಲಕ ಆಸಕ್ತ ಜನರಿಗೆ ಶಿಕ್ಷಣವನ್ನು ನೀಡುವುದು;
11. ಜಾನಪದವನ್ನು ಬಹು ಶಿಸ್ತೀಯ ಹಾಗೂ ಅಂತರಶಿಸ್ತೀಯ ನೆಲೆಗಳಲ್ಲಿ ಅಧ್ಯಯನ ಮಾಡುವುದು ಮತ್ತು ಉನ್ನತ ಮಟ್ಟಗಳಲ್ಲಿ ಸಂಶೋಧನೆಗೆ ಪ್ರೋತ್ಸಾಹವನ್ನು ನೀಡುವುದು;
12. ಕರ್ನಾಟಕದ ವಿವಿಧ ಭಾಷೆಗಳ ಮತ್ತು ಸಮುದಾಯಗಳ ಜಾನಪದವನ್ನು ತೌಲನಿಕವಾಗಿ ಅಧ್ಯಯನ ಮಾಡುವುದು;
13. ಕರ್ನಾಟಕದ ಜಾನಪದವನ್ನು ಭಾರತದ ಇತರ ರಾಜ್ಯಗಳ ಜಾನಪದದೊಡನೆ ತೌಲನಿಕವಾಗಿ ಅಧ್ಯಯನ ನಡೆಸಲು ಉತ್ತೇಜಿಸುವುದು. ಅದರಂತೆಯೇ ದಕ್ಷಿಣ ಏಷಿಯಾ ಹಾಗೂ ವಿಶ್ವದ ಇತರ ದೇಶಗಳ, ಅದರಲ್ಲೂ ವಿಶೇಷವಾಗಿ, ಅಭಿವೃದ್ಧಿಶೀಲ ದೇಶಗಳ ಜಾನಪದ ಅಧ್ಯಯನವನ್ನು ನಡೆಸಲು ಪ್ರೋತ್ಸಾಹ ನೀಡುವುದು. ಈ ಉದ್ದೇಶಗಳನ್ನು ನೆರವೇರಿಸುವುದಕ್ಕಾಗಿ ಕರ್ನಾಟಕದ, ಭಾರತದ ಮತ್ತು ವಿಶ್ವದ ಇತರ ವಿಶ್ವವಿದ್ಯಾಲಯಗಳು / ಸಂಶೋಧನ ಸಂಸ್ಥೆಗಳೊಡನೆ ಒಡಂಬಡಿಕೆ ಮಾಡಿಕೊಳ್ಳುವುದು;
14. ಕರ್ನಾಟಕದ ಜಾನಪದವನ್ನು ಮತ್ತು ಮಹತ್ವಪೂರ್ಣ ಜಾನಪದ ಅಧ್ಯಯನಗಳನ್ನು ಇಂಗ್ಲಿಷ್, ಹಿಂದಿ ಮತ್ತು ಇತರ ಭಾರತೀಯ ಹಾಗೂ ವಿದೇಶಿ ಭಾಷೆಗಳಿಗೆ ಅನುವಾದ ಮಾಡುವುದು. ಹಾಗೆಯೇ ಭಾರತದ ಮತ್ತು ವಿಶ್ವದ ಇತರ ಭಾಷೆಗಳಲ್ಲಿರುವ ಜಾನಪದ ಪಠ್ಯಗಳನ್ನು ಹಾಗೂ ಮಹತ್ವದ ಅಧ್ಯಯನಗಳನ್ನು ಕನ್ನಡಕ್ಕೆ ಅನುವಾದ ಮಾಡುವುದು.
15. ವಿಶ್ವವಿದ್ಯಾಲಯವು ಜಾನಪದ ಅಧ್ಯಯನದ ವೈವಿಧ್ಯತೆಯ ಪ್ರಕಟಣೆಗಾಗಿ ಪ್ರಸಾರಾಂಗವನ್ನು ಸ್ಥಾಪಿಸುವುದು. ಪ್ರಸಾರಾಂಗದ ಮೂಲಕ ಪುಸ್ತಕಗಳ ಪ್ರಕಟಣೆ, ವಾರ್ತಾಪತ್ರಗಳು, ಸಂಶೋಧನಾ ಪತ್ರಿಕೆಗಳು ಮೊದಲಾದ ಪ್ರಕಟಣೆಗಳನ್ನು ಹೊರತರುವುದು. ಬಹುಮಾಧ್ಯಮದ ಮೂಲಕ ಜನಪದ ಕಲೆ ಮತ್ತು ಸಂಸ್ಕೃತಿಯನ್ನು ಪ್ರಚಾರ ಮಾಡುವುದು. ಜಾನಪದದ ಬಗ್ಗೆ ಜನಸಾಮಾನ್ಯರಲ್ಲಿ ತಿಳಿವಳಿಕೆಯನ್ನು ಮೂಡಿಸಲು ವಿದ್ವಾಂಸರು ಮತ್ತು ಕಲಾವಿದರಿಂದ ಪ್ರಚಾರೋಪನ್ಯಾಸಗಳನ್ನು ಏರ್ಪಡಿಸುವುದು;
16. ಸ್ವಾವಲಂಬಿ ಮತ್ತು ಸ್ವ ಉದ್ಯೋಗ ಕಲ್ಪಿಸುವ ಗುಡಿಕೈಗಾರಿಕೆಗಳ ಹಾಗೂ ವೃತ್ತಿ ಕೌಶಲಗಳ ಸಂವರ್ಧನೆಗೆ ಪ್ರಯತ್ನವನ್ನು ನಡೆಸುವುದು;
17. ಪಾರಂಪರಿಕ ಕಸಬುದಾರಿಕೆಯ ಉತ್ಪನ್ನಗಳಿಗೆ ಮಾರುಕಟ್ಟೆಯನ್ನು ಕಲ್ಪಿಸಿಕೊಡುವುದು ಮತ್ತು ಆಕ ಭದ್ರತೆಯನ್ನು ಒದಗಿಸುವುದು;
18. ಜಾನಪದದಲ್ಲಿರಬಹುದಾದ ಎಲ್ಲ ಅಸಂಗತ, ಅವೈಚಾರಿಕ, ಅಮಾನವೀಯ ಹಾಗೂ ಅವೈಜ್ಞಾನಿಕ ಅಂಶಗಳನ್ನು ನಿವಾರಿಸಿ ಸಮಾಜದ ಸ್ವಾಸ್ಥ್ಯ ಹಾಗೂ ಸಾಮರಸ್ಯವನ್ನು ಸಾಧಿಸಲು ಅವಶ್ಯಕವಾದ ಶಿಕ್ಷಣವನ್ನು ನೀಡುವುದು;
19. ಅಲಕ್ಷಿತ ಸಮುದಾಯದವರಿಗೆ ಆಧುನಿಕ ಶಿಕ್ಷಣವನ್ನು ನೀಡುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತಂದು ಅವರಲ್ಲಿ ಆತ್ಮಸ್ಥೈರ್ಯವನ್ನು ಉಂಟುಮಾಡುವುದು. ಅನೌಪಚಾರಿಕ ಶಿಕ್ಷಣ, ಸಮೂಹ ಸಂವಹನ ಹಾಗೂ ಗ್ರಾಮೀಣಾಭಿವೃದ್ಧಿ ಚಟುವಟಿಕೆಗಳಲ್ಲಿ ಜಾನಪದವನ್ನು ಪೂರ್ಣಪ್ರಮಾಣದಲ್ಲಿ ಬಳಸಿಕೊಳ್ಳುವ ಉದ್ದೇಶಕ್ಕಾಗಿ ಒಂದು ಪ್ರತ್ಯೇಕ ಅಭಿವೃದ್ಧಿ ಅಧ್ಯಯನ ವಿಭಾಗವನ್ನು ತೆರೆಯುವುದು;
20. ಕಾಲಕಾಲಕ್ಕೆ ಜಾನಪದ ಅಧ್ಯಯನ ವಿಷಯಕ್ಕೆ ಪ್ರಸ್ತುತ ಎನಿಸುವ ಯೋಜನೆಗಳನ್ನು ರೂಪಿಸಿ ಅವುಗಳನ್ನು ಕಾರ್ಯಗತಗೊಳಿಸುವುದು.