ಯಾವುದೇ ದೇಶ ಅಥವಾ ನಾಡಿನ ಶ್ರೀಮಂತಿಕೆಯನ್ನು ಅಳೆಯಲು ಆ ನಾಡಿನ ಸಂಸ್ಕೃತಿ ಮತ್ತು ಪರಂಪರೆ, ಅಲ್ಲಿಯ ಜೀವನ ವಿಧಾನ ಮತ್ತು ಆ ಜನರು ಅನುಸರಿಸುವ ಮೌಲ್ಯಾದರ್ಶಗಳು ಮುಖ್ಯವಾಗುತ್ತವೆ. ಅಂಥ ಶ್ರೀಮಂತ ಇತಿಹಾಸ ಮತ್ತು ಪರಂಪರೆಯುಳ್ಳ ನಾಡು ಕರ್ನಾಟಕ. ಈ ನೆಲದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಎಲ್ಲವೂ ವಿಶಿಷ್ಟ ಹಾಗೂ ಅನನ್ಯ. ಅಂತೆಯೇ ಈ ಕಲೆ, ಸಂಸ್ಕೃತಿ ಮತ್ತು ಜ್ಞಾನಪರಂಪರೆಗಳು ಅಳಿಸಿ ಹೋಗದಂತೆ ಮಾಡಲು ಹಾಗೂ ಅವುಗಳ ಸಂರಕ್ಷಣೆ ಹಾಗೂ ಸಂವರ್ಧನೆಗಾಗಿ ರಾಜ್ಯ ಸರ್ಕಾರ ಹಾವೇರಿ ಜಿಲ್ಲೆ, ಶಿಗ್ಗಾವಿ ತಾಲ್ಲೂಕು ಗೋಟಗೋಡಿಯಲ್ಲಿ ಪ್ರಪಂಚದಲ್ಲೇ ಮೊದಲನೆಯದಾದ ಜಾನಪದ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದೆ. ನಾಡಿನ ಮಧ್ಯಭಾಗದಲ್ಲಿರುವ ಹಾವೇರಿ ಜಿಲ್ಲೆ ರಾಜ್ಯದ ನಾಲ್ದೆಸೆಯ ಜನಪದರ ಬದುಕು, ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಪುನಶ್ಚೇತನ ಕೇಂದ್ರವಾಗಲಿದೆ ಎನ್ನುವುದು ಅಭಿಮಾನದ ಸಂಗತಿಯಾಗಿದೆ.
ಹಾವೇರಿ ಜಿಲ್ಲೆ ಮೂಲತಃ ಕಲೆ-ಕಲಾವಿದರ ನೆಲೆವೀಡು. ದೊಡ್ಡಾಟ ಕಲೆಯ ಪುನಶ್ಚೇತನಕ್ಕಾಗಿ ಶ್ರಮಿಸಿದ ಕಲಾವಿದರ ತಾಣ. ರಂಗಕಲೆಯನ್ನು ಜೀವಂತವಾಗಿ ಇರಿಸುವಲ್ಲಿ ಶ್ರಮಿಸುತ್ತಿರುವ ರಂಗಗ್ರಾಮ 'ಶೇಷಗಿರಿ' ಇರುವುದು ಈ ಜಿಲ್ಲೆಯಲ್ಲೇ. ಬಹುಹಿಂದಿನಿಂದಲೂ ಸೂತ್ರದ ಗೊಂಬೆಗಳನ್ನು ಕುಣಿಸಿ ಸೂತ್ರದ ಗೊಂಬೆಯಾಟವನ್ನು ಜೀವಂತವಾಗಿರಿಸಿರುವ ಅಂತರವಳ್ಳಿ ಮತ್ತು ಯರೇಗ್ಪು ಇರುವುದು ಕೂಡ ಇಲ್ಲಿಯೇ. ಇಂಥ ಶ್ರೀಮಂತ ಕಲಾಪರಂಪರೆಯುಳ್ಳ ಈ ಪ್ರದೇಶದಲ್ಲಿ ಜಾನಪದ ವಿಶ್ವವಿದ್ಯಾಲಯ ಅಸ್ತಿತ್ವಕ್ಕೆ ಬಂದಿರುವುದು ವಿಶೇಷ.
ಜಾನಪದ ವಿಶ್ವವಿದ್ಯಾಲಯದ ಕೇಂದ್ರಸ್ಥಾನದ ಆವರಣ ಸುಂದರ ಪ್ರಾಕೃತಿಕ ಪರಿಸರದಲ್ಲಿದ್ದು ಉನ್ನತ ಶಿಕ್ಷಣಕ್ಕೆ ಸೂಕ್ತ ತಾಣವಾಗಿದೆ. ಜಿಲ್ಲಾ ಕೇಂದ್ರವಾಗಿರುವ ಹಾವೇರಿ ಪಟ್ಟಣದಿಂದ 36 ಕಿ.ಮೀ. ಹಾಗೂ ತಾಲ್ಲೂಕು ಕೇಂದ್ರವಾದ ಶಿಗ್ಗಾವಿಯಿಂದ 6 ಕಿ.ಮೀ. ದೂರದಲ್ಲಿ ರಾಷ್ಟ್ರೀಯ ಹೆದ್ದಾರಿ-4ರಲ್ಲಿರುವ `ಗೊಟಗೋಡಿ' ಎಂಬ ಸ್ಥಳದಲ್ಲಿ ಈ ವಿಶ್ವವಿದ್ಯಾಲಯ ಕಾರ್ಯ ನಿರ್ವಹಿಸುತ್ತಿದೆ.
ಜಾನಪದ ವಿಶ್ವವಿದ್ಯಾಲಯ ಒಂದು ಅನನ್ಯವಾದ ಶೈಕ್ಷಣಿಕ ಚಹರೆಯನ್ನು ಧಾರಣಗೊಳಿಸಿಕೊಂಡಿದ್ದು, ಪ್ರಸಕ್ತಕಾಲದ ಅಗತ್ಯಗಳಿಗನುಗುಣವಾಗಿ ದೇಶೀ ಜ್ಞಾನ ಪರಂಪರೆಗಳ ಅಧ್ಯಯನ ಹಾಗೂ ಅವುಗಳ ಸಂವರ್ಧನೆಗೆ ಕಟಿಬದ್ಧವಾಗಿದೆ. ಜನಪದರ ಲೋಕದೃಷ್ಟಿ, ಅವರ ವಿವೇಕ ಹಾಗೂ ಜಾಗತೀಕರಣದಿಂದಾಗಿ ತೀವ್ರಗತಿಯಲ್ಲಿ ಬದಲಾಗುತ್ತಿರುವ ಪ್ರಪಂಚಕ್ಕೆ ಪರ್ಯಾಯ ಜ್ಞಾನ ಆಕರವಾಗಿ ಅದರ ಪ್ರಸ್ತುತತೆಗೆ ವಿಶ್ವವಿದ್ಯಾಲಯ ವಿಶೇಷ ಗಮನಹರಿಸುತ್ತದೆ. ಶಿಷ್ಟ ಭಾಷೆಯ ಯಾಜಮಾನ್ಯಕ್ಕೆ ಭಿನ್ನವಾಗಿ ಮೌಖಿಕತೆಯಲ್ಲಿ ಸಾಂಸ್ಕೃತಿಕ ಅಭಿವ್ಯಕ್ತಿ ಹಾಗೂ ಮೌಖಿಕ ಸಂಕಥನಕ್ಕೆ ಹೆಚ್ಚು ಒತ್ತು ಕೊಡುತ್ತದೆ.
ಕಲಿಕೆ ಮತ್ತು ತರಬೇತಿ ಕಾರ್ಯಕ್ರಮಗಳೊಂದಿಗೆ ಕಾಲಕಾಲಕ್ಕೆ ವಿಚಾರ ಸಂಕಿರಣಗಳು, ಸಮ್ಮೇಳನಗಳು ಹಾಗೂ ಶಿಬಿರಗಳನ್ನು ಆಯೋಜಿಸಿ ಸಂಶೋಧನೆ ಮತ್ತು ವಿಸ್ತರಣ ಚಟುವಟಿಕೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲು ಉದ್ದೇಶಿಸಿದೆ. ಆರಂಭದಲ್ಲಿ ಹದಿನೇಳು ಅಧ್ಯಯನ ವಿಭಾಗಗಳನ್ನು ಹೊಂದಲಿರುವ ಈ ವಿಶ್ವವಿದ್ಯಾಲಯ ಸಾಮಾನ್ಯ ಜಾನಪದ, ಶಾಬ್ದಿಕ ಜಾನಪದ, ಜನಪದ ಕಲೆಗಳ ಅಧ್ಯಯನ, ಪಾರಂಪರಿಕ ವಿಜ್ಞಾನ ಮತ್ತು ತಂತ್ರಜ್ಞಾನ, ಅಲಕ್ಷಿತ ಅಧ್ಯಯನಗಳು ಹಾಗೂ ಆನ್ವಯಿಕ ಜಾನಪದ ಎಂಬ ಆರು ನಿಕಾಯಗಳನ್ನು ಹೊಂದಿರುತ್ತದೆ. ಜಾನಪದ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮಾಡಿರುವ ಸಂಸ್ಥೆಗಳಿಗೆ ಮನ್ನಣೆ ದೊರಕಿಸಿಕೊಡುವುದು ಮತ್ತು ರಾಜ್ಯದ ಬೇರೆ ಬೇರೆ ಪ್ರದೇಶದ ಸಾಹಿತ್ಯ, ಕಲೆ, ಸಂಸ್ಕೃತಿಯ ಸಂವರ್ಧನೆಗಾಗಿ ಬೇರೆ ಬೇರೆ ಸ್ಥಳಗಳಲ್ಲಿ ಪ್ರಾದೇಶಿಕ ಕೇಂದ್ರಗಳನ್ನು ತೆರೆಯಲು ಉದ್ದೇಶಿಸಿದೆ.
ವಿಶ್ವವಿದ್ಯಾಲಯವು ಜಾನಪದ ಮತ್ತು ಅದರ ಆನ್ವಯಿಕತೆಗೆ ವಿಶೇಷ ಒತ್ತುಕೊಟ್ಟು ಎಂ.ಎ., ಎಂ.ಎಸ್ಸಿ., ಎಂ.ಬಿ.ಎ., ಪಿ ಎಚ್.ಡಿ. ಕಾರ್ಯಕ್ರಮಗಳೊಂದಿಗೆ ಆಯ್ದ ಕೆಲವು ಸಂಯೋಜಿತ ಶಿಕ್ಷಣಗಳನ್ನು ನೀಡಲು ಕ್ರಮವಹಿಸಿದೆ. ವಿಶೇಷವಾಗಿ ಒಂದು ಆರ್ಕೈವ್ಸ್ ಹಾಗೂ ಗ್ರಂಥಾಲಯವನ್ನು ರೂಪಿಸುವುದು ಆದ್ಯತೆಯ ಕಾರ್ಯವಾಗಿದೆ. ಕರ್ನಾಟಕ ಹಾಗೂ ದೇಶದಾದ್ಯಂತ ಜಾನಪದ ಸಂಬಂಧವಾದ ಎಲ್ಲ ಚಟುವಟಿಕೆಗಳ ಮುಖ್ಯ ಕೇಂದ್ರವಾಗಿ ಬೆಳೆಯಬೇಕೆಂಬುದು ಇದರ ಗುರಿಯಾಗಿದೆ. ಕರ್ನಾಟಕದ ಅತ್ಯಂತ ಸಮೃದ್ಧವೂ ವೈವಿಧ್ಯಪೂರ್ಣವೂ ಆದ ಭೌತಿಕ ಸಂಸ್ಕೃತಿಯನ್ನು ಅನಾವರಣಗೊಳಿಸಲು ವಿಶ್ವವಿದ್ಯಾಲಯದಲ್ಲಿ ಒಂದು ಬೃಹತ್ತಾದ ವಸ್ತುಸಂಗ್ರಹಾಲಯವನ್ನು ನಿರ್ಮಿಸಲಾಗುವುದು. ನಾಡಿನ ಜನತೆಯ ಉದಾರ ನೆರವಿನಿಂದ ಕಲಾತ್ಮಕವಾದ ಎಲ್ಲ ಬಗೆಯ ಬಳಕೆಯ ವಸ್ತುಗಳನ್ನು ಇಲ್ಲಿ ಶೇಖರಿಸಿ ಪ್ರದರ್ಶನಕ್ಕೆ ಸಜ್ಜುಗೊಳಿಸಲಾಗುವುದು. ಕೃಷಿ ಸಲಕರಣೆಗಳು ಗೃಹೋಪಯೋಗಿ ಸಲಕರಣೆಗಳು, ಅಳತೆಯ ಮಾನಗಳು, ಉಡುಗೆ ತೊಡುಗೆಗಳು, ಪೀಠೋಪಕರಣಗಳು, ಸಂಗೀತೋಪಕರಣಗಳು ಇತ್ಯಾದಿ ವಸ್ತುಭಂಡಾರವನ್ನೇ ಇಲ್ಲಿ ಹೊಂದಲಾಗುವುದು. ಆಧುನೀಕರಣ ಹಾಗೂ ಜಾಗತೀಕರಣದಿಂದಾಗಿ ತೀವ್ರವಾಗಿ ಕಣ್ಮರೆಯಾಗುತ್ತಿರುವ ಜನಪದ ಭೌತಿಕ ಸಂಸ್ಕೃತಿಯನ್ನು ಸಂರಕ್ಷಿಸಿಡುವುದೇ ಇದರ ಉದ್ದೇಶ.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಜಾನಪದ ಅಧ್ಯಯನಕ್ಕೆ ವಿಸ್ತೃತವಾದ ನೆಲೆಗಳನ್ನು ಒದಗಿಸಲೆಂಬ ವಿಶಿಷ್ಟ ಗುರಿಯನ್ನು ಸಾಧಿಸಲಿಕ್ಕಾಗಿಯೇ ಆರಂಭಗೊಂಡಿದೆ.
ಕರ್ನಾಟಕ ಘನ ಸರ್ಕಾರವು ಕನ್ನಡದ ಸಮಸ್ತ ಜನರ ಆಶೋತ್ತರಗಳಿಗೆ ಸ್ಫಂದಿಸಲೆಂದೇ ಕರ್ನಾಟಕ ಜನಪದ ಸಂಸ್ಕೃತಿಯನ್ನು ಅಧ್ಯಯನ ಮಾಡಲೆಂದು ಹಾಗೂ ಕನ್ನಡ ಜಾನಪದ ವಿಜ್ಞಾನದ ಬೆಳವಣಿಗೆಗೆಂದೇ ಕರ್ನಾಟಕ ಜಾನಪದ ವಿಶ್ವವಿದ್ಯಾಲಯವನ್ನು ಆರಂಭಿಸಿದೆ. ಪಶ್ಚಿಮಕ್ಕೆ ಸಹ್ಯಾದ್ರಿಯ ಪರ್ವತದ ಕೊನೆಯ ಅಂಚಿನ ಹಾಗೂ ಪೂರ್ವಕ್ಕೆ ಬಯಲುಸೀಮೆಯ ವಿಶಾಲ ಮೈದಾನ ಭೂಮಿಯಲ್ಲಿಯ ನಡುವಿನ ಸುಂದರ ಭೌಗೋಳಿಕ ಪರಿಸರದ ನಡುವಿನ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಗೊಟಗೋಡಿ ಗ್ರಾಮದಲ್ಲಿ ಈ ವಿಶ್ವವಿದ್ಯಾಲಯವು ತಲೆಯೆತ್ತಿದೆ.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ಮುಂದಿನ ದಿನಗಳಲ್ಲಿ ಕರ್ನಾಟಕ ಸರ್ಕಾರದ ಅರ್ಥಪೂರ್ಣ ನೆರವಿನಿಂದ ಕರ್ನಾಟಕ ಸಂಸ್ಕೃತಿಯಲ್ಲಿಯೇ ಬಹು ವೈವಿಧ್ಯವನ್ನು ಸಾಂಸ್ಕೃತಿಕ ಸಿರಿವಂತಿಕೆಯನ್ನು ಹೊಂದಿರುವ ಕರ್ನಾಟಕದ ಜನಪದ ಸಂಸ್ಕೃತಿಯ ವಿರಾಟ ಸ್ವರೂಪವನ್ನು ಪರಿಚಯಿಸುವ ಹಾಗೂ ಅಧ್ಯಯನದ ಮೂಲಕ ಅದರ ಅಂತಃಸತ್ವವನ್ನು ತಿಳಿಸುವ ಮಹತ್ಕಾರ್ಯವನ್ನು ಯಶಸ್ವಿಯಾಗಿ ಮಾಡಲಿದೆ. ಪ್ರಸಕ್ತ ವರ್ಷದಲ್ಲಿಯೇ ಈ ಪ್ರಕಾರವಾಗಿ ಜನಪದ ಸಂಸ್ಕೃತಿಯನ್ನು ವಿವಿಧ ದೃಷ್ಟಿಕೋನಗಳಿಂದ ಅಧ್ಯಯನ ಮಾಡಲೆಂದೇ ಇದರಲ್ಲಿ ಜಾನಪದ ಸರ್ವೇಕ್ಷಣೆ ಮತ್ತು ದಾಖಲಾತಿ ಕಾರ್ಯ ನಡೆಸಲು ಅವಕಾಶವಿದೆ. ಈ ವಿಶ್ವವಿದ್ಯಾಲಯದ ಸ್ಥಾಪನೆಯಿಂದಾಗಿ ಬಹುಭಾಷಾ ಸಂಸ್ಕೃತಿಯ ದೇಶವಾದ ಭಾರತದಲ್ಲಿ ಕನ್ನಡ ಸಂಸ್ಕೃತಿಯ ಕುರಿತು ಅರ್ಥಪೂರ್ಣವಾಗಿ ಅಧ್ಯಯನ ನಡೆಸಲು ಸಾಧ್ಯವಾಗಬಲ್ಲಂತಹ ಅವಕಾಶ ಒದಗಿಸುವ ಮೂಲಕ ಉನ್ನತ ಶಿಕ್ಷಣ ಕೇತ್ರದಲ್ಲಿಯೇ ಹೊಸ ಮಜಲನ್ನು ಸೃಷ್ಟಿಸಿದ ಕೀರ್ತಿಗೆ ಕರ್ನಾಟಕವು ಭಾಜನವಾಗಿರುವುದು ಹೆಮ್ಮೆಯ ವಿಷಯವಾಗಿದೆ.