ಪ್ರೊ.ಟಿ.ಎಂ.ಭಾಸ್ಕರ್
ಕುಲಪತಿ
ಕರ್ನಾಟಕ ಜಾನಪದ ವಿಶ್ವವಿದ್ಯಾಲಯ
ದಿನಾಂಕ:19.07.2022 ರಿಂದ
ಕರ್ನಾಟಕ ಅಮೂಲ್ಯ ಹಾಗೂ ಸಮೃದ್ಧ ಜಾನಪದ ಸಂಪತ್ತಿನ ಆಗರವಾಗಿದೆ. ಈ ಜ್ಞಾನದ ಅನನ್ಯತೆಯನ್ನು ಶೋಧಿಸುವ, ಸಂರಕ್ಷಿಸುವ ಹಾಗೂ ಸಂವರ್ಧನೆಯ ಕಾರ್ಯವನ್ನು ನಿರ್ವಹಿಸುವ ಉದ್ದೇಶಕ್ಕಾಗಿ, ಅನಂತ ವೈವಿಧ್ಯದ ಈ ಜ್ಞಾನದ ಸಂಗ್ರಹ, ಸಂಪಾದನೆ, ಕಲಿಕೆ, ಪ್ರದರ್ಶನ ಕಾರ್ಯಗಳನ್ನು ಇನ್ನೂ ತೀವ್ರಗತಿಯಲ್ಲಿ ಪ್ರಮಾಣಬದ್ಧವಾಗಿ ಮತ್ತು ವೈಜ್ಞಾನಿಕವಾಗಿ ನಡೆಸುವ ಉದ್ದೇಶಕ್ಕಾಗಿ ಜಾನಪದ ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ಅಗತ್ಯವಿತ್ತು. ಸಮಗ್ರ ಸರ್ವೇಕ್ಷಣೆ ಹಾಗೂ ದಾಖಲೀಕರಣದ ಜೊತೆಯಲ್ಲಿ ನಾಡವರ ಅಪ್ರತಿಮ ಕಲಾ ಪ್ರತಿಭೆ ಮತ್ತು ಕೌಶಲ್ಯವನ್ನು ತೆರೆದಿಡುವ ಪಾರಂಪರಿಕ ಕಲೆ ಮತ್ತು ಸಂಸ್ಕೃತಿಯ ಪರಿಶೋಧನ ಕಾರ್ಯ ತ್ವರಿತವಾಗಿ ಆಗಬೇಕಾಗಿದೆ. ಬಹುಭಾಷಿಕ ಹಾಗೂ ಬಹುಸಂಸ್ಕೃತಿಗಳ ಈ ನಾಡಿನಲ್ಲಿ ಇನ್ನೂ ಅನಾವರಣಗೊಳ್ಳದ ಜ್ಞಾನ ಸಂಪತ್ತು ಅಗಾಧವಾಗಿದೆ. ಇಂತಹ ಸಂದರ್ಭದಲ್ಲಿ ನೆಲದ ಸಂಸ್ಕೃತಿಯನ್ನು ಬದುಕುತ್ತಿರುವ ನಾಡಿನ ಸಮಸ್ತರ ಒಲವು ಮತ್ತು ನಿರೀಕ್ಷೆ ಅಪಾರವಾದುದೇ ಆಗಿದೆ.
ನಾಡಿನ ಜನತೆಯ ನರನಾಡಿಯನ್ನು ಬಲ್ಲವರಾಗಿದ್ದ, ಗ್ರಾಮೀಣ ಬದುಕು ಹಸನಾಗಬೇಕು ಎಂದು ಹಂಬಲಿಸುತ್ತಿದ್ದ ಆಗಿನ ಗ್ರಾಮೀಣಾಭಿವೃದ್ಧಿ ಸಚಿವ ದಿವಂಗತ ಅಬ್ದುಲ್ ನಜೀರ್ ಸಾಬ್ ಅವರ ನಿರ್ದೇಶನದ ಮೇರೆಗೆ ಜಾನಪದ ತಜ್ಞ ದಿವಂಗತ ಜೀ.ಶಂ. ಪರಮಶಿವಯ್ಯ ಅವರು ಜಾನಪದ ಸಂರಕ್ಷಣೆ ಹಾಗೂ ಸಂವರ್ಧನೆ ಹೇಗೆ ಎಂಬ ವಿಚಾರಗಳನ್ನೊಳಗೊಂಡ ಒಂದು ಪ್ರಸ್ತಾವನೆಯನ್ನು ಸಿದ್ಧಪಡಿಸಿ 1988 ರಲ್ಲಿ ಸರ್ಕಾರಕ್ಕೆ ಸಲ್ಲಿಸಿದ್ದರು. ಆ ಪ್ರಸ್ತಾವನೆಯಲ್ಲಿ ಜಾನಪದ ವಿಶ್ವವಿದ್ಯಾಲಯದ ಆವಶ್ಯಕತೆಯನ್ನು ಮೊದಲ ಬಾರಿಗೆ ಮಂಡಿಸಲಾಗಿತ್ತು. ಜೀಶಂಪ ಕಂಡ ಕನಸು ಶ್ರೀ ಗೊ. ರು. ಚನ್ನಬಸಪ್ಪನವರ ಮುಂದಾಳತ್ವದಲ್ಲಿ ಪ್ರೊ. ದೇಜಗೌ, ಪ್ರೊ. ಚಂದ್ರಶೇಖರ ಕಂಬಾರ, ದಿ. ಜಿ. ನಾರಾಯಣ, ಟಿ.ಕೆಂಪಹನುಮಯ್ಯ, ಡಿ.ಲಿಂಗಯ್ಯ, ಮುಖ್ಯಮಂತ್ರಿ ಚಂದ್ರು ಇನ್ನು ಮುಂತಾದವರ ಪ್ರಯತ್ನದಿಂದ ನನಸಾಗುವ ದಾರಿ ಹಿಡಿದದ್ದು ಸಂತೋಷದ ಸಂಗತಿ.
ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಜಾನಪದ ಸಂರಕ್ಷಣೆ, ಸಂವರ್ಧನೆ ಹಾಗೂ ಅಧ್ಯಯನಕ್ಕೆ ಸಂಬಂಧಿಸಿದಂತೆ ವಿದ್ವಾಂಸರು ತಳೆದ ಆಸ್ಥೆ-ಆಸಕ್ತಿ ಹಾಗೂ ಕರ್ನಾಟಕದಲ್ಲಿ ನಡೆಯುತ್ತಾ ಬಂದಿರುವ ಜಾನಪದ ಸಂಬಂಧವಾದ ಚಟುವಟಿಕೆಗಳನ್ನು ನಿಕಟವಾಗಿ ಬಲ್ಲ ಸನ್ಮಾನ್ಯ ಶ್ರೀ ಗೊ.ರು. ಚನ್ನಬಸಪ್ಪನವರು ಜಾನಪದಕ್ಕೇ ಮೀಸಲಾದ ಏಕಶಿಸ್ತೀಯ ವಿಶ್ವವಿದ್ಯಾಲಯವೊಂದು ಜರೂರಾಗಿ ಸ್ಥಾಪನೆಯಾಗಬೇಕಾದ ಅಗತ್ಯವನ್ನು ಮನಗಂಡು ಸರ್ಕಾರಕ್ಕೆ ದಿನಾಂಕ 18.05.2009 ರಂದು ಅಧಿಕೃತವಾದ ಪ್ರಸ್ತಾವನೆಯೊಂದನ್ನು ಸಲ್ಲಿಸಿದರು. ಕರ್ನಾಟಕ ಜಾನಪದ ಅಕಾಡೆಮಿಯ ಆಶ್ರಯದಲ್ಲಿ ಜಾನಪದ ತಜ್ಞರ ಸಭೆಯೊಂದನ್ನು ಆಯೋಜಿಸಿ ವಿಶ್ವವಿದ್ಯಾಲಯದ ಸ್ಥಾಪನೆ ಜರೂರಾಗಿ ಅಗತ್ಯವಾಗಿ ಆಗಬೇಕು ಎಂಬ ನಿರ್ಣಯವನ್ನು ಅಂಗೀಕರಿಸಿ ಸರ್ಕಾರಕ್ಕೆ ಅದನ್ನು ದಿನಾಂಕ 23.07.2009 ರಂದು ಸಲ್ಲಿಸಲಾಯಿತು. ಅದಕ್ಕೆ ಸ್ಪಂದಿಸಿದ ಸರ್ಕಾರ 22.12.2009 ರಂದು ಜಾನಪದ ತಜ್ಞರೊಡನೆ ಸಮಾಲೋಚನೆ ನಡೆಸಿ ಸಭೆಯ ನಿರ್ಣಯಗಳನ್ನು ಮುಖ್ಯಮಂತ್ರಿಗಳ ಅವಗಾಹನೆಗೆ ತಂದಿತು.
ಈ ಹಿನ್ನೆಲೆಯಲ್ಲಿ ಆಗಿನ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಬಿ. ಎಸ್. ಯಡಿಯೂರಪ್ಪನವರ ಕನಸಿನ ಕೂಸಾಗಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಆವಿರ್ಭಾವವಾಯಿತು. 2010 ರ ಸೆಪ್ಟೆಂಬರ್ 28 ರಂದು ಜಾನಪದ ವಿಶ್ವವಿದ್ಯಾಲಯ ಸ್ಥಾಪನಾ ಘೋಷಣೆಯೊಂದಿಗೆ ವಿಶೇಷಾಧಿಕಾರಿಯನ್ನು ನೇಮಿಸಲಾಯಿತು.
ವಿಶೇಷಾಧಿಕಾರಿಯಾಗಿ ಕಾರ್ಯಭಾರ ವಹಿಸಿಕೊಂಡ ಮೇಲೆ ಜಾನಪದ ವಿಶ್ವವಿದ್ಯಾಲಯದ ಕೇಂದ್ರ ಸ್ಥಾನಕ್ಕಾಗಿ ಮಧ್ಯ ಕರ್ನಾಟಕ ಪರಿಸರದಲ್ಲಿ ಸ್ಥಳ ಪರಿವೀಕ್ಷಣ ಕಾರ್ಯ ಕೈಗೊಳ್ಳಲಾಯಿತು. ಈ ಸ್ಥಳ ಪರಿಶೀಲನಾಕಾರ್ಯ ಕರ್ನಾಟಕ ಜಾನಪದ ಅಕಾಡೆಮಿಯ ಆಗಿನ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಗೊ. ರು. ಚನ್ನಬಸಪ್ಪ ಅವರ ನೇತೃತ್ವದಲ್ಲಿ ಪ್ರೊ. ಎಂ. ಎಂ. ಕಲಬುರ್ಗಿ, ಡಾ. ಸಿ. ವೀರಣ್ಣ, ಡಾ. ಬಸವರಾಜ ಮಲಸೆಟ್ಟಿ ಹಾಗೂ ಡಾ. ರಾಮು ಮೂಲಗಿ ಅವರು ಸೇರಿಕೊಂಡ ತಂಡದಿಂದ ನಡೆಯಿತು. ಜಾನಪದ ಮತ್ತು ನಿಸರ್ಗಕ್ಕೆ ಇರುವ ನಿಕಟ ಸಂಬಂಧವನ್ನು ಲಕ್ಷ್ಯದಲ್ಲಿಟ್ಟುಕೊಂಡು ಸ್ಥಳಗಳನ್ನು ಪರಿಶೀಲಿಸಲಾಯಿತು. ಅಂತರ್ಜಲ, ರಾಷ್ಟ್ರೀಯ ಹೆದ್ದಾರಿ, ರೈಲು, ವಿಮಾನಯಾನ ಸೌಲಭ್ಯವಿರುವ ಗೊಟಗೋಡಿ ಎಂಬ ಸ್ಥಳವನ್ನು ಗುರುತಿಸಲಾಯಿತು. ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕು ರಾಷ್ಟ್ರೀಯ ಹೆದ್ದಾರಿ - 4ಕ್ಕೆ ಹೊಂದಿಕೊಂಡಂತಿರುವ ಸುಂದರ ಕೆರೆ-ಕಿರುಗುಡ್ಡ ತಪ್ಪಲುಗಳಿಂದ ಆವೃತವಾದ ನಿಸರ್ಗ ರಮ್ಯತಾಣ ಇದು. ರಸ್ತೆ, ರೈಲು, ವಿಮಾನ ಸಂಪರ್ಕಕ್ಕೆ ಈ ಸ್ಥಳ ಅನುಕೂಲಕರವಾಗಿದೆ. ಇದು ಮಧ್ಯಕರ್ನಾಟಕದ ತಾಣದಲ್ಲೇ ಇರುವುದು ಈ ಸ್ಥಳದ ಆಯ್ಕೆಗೆ ಪುಷ್ಟಿ ನೀಡಿದೆ.
ಕೈಗಾರಿಕೀಕರಣ, ಉದಾರೀಕರಣ ಹಾಗೂ ಜಾಗತೀಕರಣದ ಅಬ್ಬರದಲ್ಲಿ ಗ್ರಾಮೀಣ ಹಾಗೂ ಗುಡ್ಡಗಾಡು ಜನರ ಮೂಲ ಬದುಕೇ ಹದಗೆಡುತ್ತಿರುವ ಈ ಸಂದಿಗ್ಧ ಸನ್ನಿವೇಶದಲ್ಲಿ ನಮ್ಮ ಪಾರಂಪರಿಕ ಜ್ಞಾನಪದ್ಧತಿಗಳ ಸತ್ವ ಮತ್ತು ಮೌಲ್ಯವನ್ನು ಹೊಸ ತಲೆಮಾರಿಗೆ ಮನಗಾಣಿಸಿಕೊಡುವುದರೊಂದಿಗೆ ಅದನ್ನು ಇವತ್ತಿನ ಬದುಕಿಗೆ ಹೊಂದಿಸುವ ಪ್ರಯತ್ನ ತುರ್ತಾಗಿ ಆಗಬೇಕಾಗಿದೆ. ಈ ಹಿನ್ನೆಲೆಯಲ್ಲಿ ಶ್ರೀ ಗೊ. ರು. ಚನ್ನಬಸಪ್ಪನವರ ನೇತೃತ್ವದಲ್ಲಿ ಜಾನಪದ ವಿಶ್ವವಿದ್ಯಾಲಯ ಸ್ಥಾಪನೆಗೆ ನಿರ್ಧಾರ ಕೈಗೊಳ್ಳುವಂತೆ ಮಾಡಿದ್ದು ಇತಿಹಾಸ. ಆಗಿನ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಬಿ. ಎಸ್. ಯಡಿಯೂರಪ್ಪ ಅವರನ್ನು ಬೆಂಬಿಡದೆ ಅನುಸರಿಸಿ ಮನವೊಲಿಸಿದವರು ಶ್ರೀ ಗೊ.ರು.ಚ. ಮತ್ತು ಅವರ ಪಡೆ. ಬೆಂಗಳೂರು - ಪುಣೆ ರಾಷ್ಟ್ರೀಯ ಹೆದ್ದಾರಿ 4 ರಲ್ಲಿರುವ ಗೊಟಗೋಡಿಯಲ್ಲಿ ವಿಶ್ವವಿದ್ಯಾಲಯ ಅಸ್ತಿತ್ವ ಹೊಂದಲು ಒತ್ತಾಸೆ ನೀಡಿದವರು ಆಗಿನ ಮಾನ್ಯ ಸಚಿವದ್ವಯರಾದ ಶ್ರೀ ಬಸವರಾಜ ಬೊಮ್ಮಾಯಿ ಹಾಗೂ ಶ್ರೀ ಸಿ. ಎಂ. ಉದಾಸಿ ಅವರು. ವಿಶ್ವವಿದ್ಯಾಲಯದ ಸ್ಥಾಪನಾ ಪ್ರಕ್ರಿಯೆ ಆರಂಭಗೊಂಡಂದಿನಿಂದ ಅದರ ಉದ್ಘಾಟನಾ ದಿನದವರೆಗೂ ಶ್ರೀ ಬೊಮ್ಮಾಯಿ ಅವರು ವಹಿಸಿದ ಕಾಳಜಿ ಉಲ್ಲೇಖಾರ್ಹ. ವಿಶ್ವವಿದ್ಯಾಲಯಕ್ಕೆ ಅಗತ್ಯವಾದ ಭೂಮಿಯನ್ನು ದೊರಕಿಸಿಕೊಡುವಲ್ಲಿ ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿ ಅವರ ಪಾತ್ರ ಹಿರಿದಾದುದು. ತಮ್ಮ ಸ್ವಕ್ಷೇತ್ರದಲ್ಲಿ ರೂಪುಗೊಂಡ ಈ ವಿಶ್ವವಿದ್ಯಾಲಯ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳಗಬೇಕು ಎಂಬುದು ಅವರ ಹೆಬ್ಬಯಕೆ. ಇಲ್ಲಿ ನೆನಪಿಸಿಕೊಳ್ಳಬೇಕಾದ ಇನ್ನಿಬ್ಬರು ಪ್ರಮುಖರೆಂದರೆ ಜಾನಪದ ತಜ್ಞರ ಸಮಾಲೋಚನೆ ಸಭೆ ಜರುಗಿಸಿ ವಿಶ್ವವಿದ್ಯಾಲಯದ ಸ್ಥಾಪನೆಗೆ ಭೂಮಿಕೆ ರೂಪಿಸಿದ ಆಗಿನ ಶಿಕ್ಷಣ ಸಚಿವ ಮಾನ್ಯ ಶ್ರೀ ಅರವಿಂದ ಲಿಂಬಾವಳಿ ಹಾಗೂ ಸರಳ ಸಜ್ಜನಿಕೆಯ ಸಚಿವ ದಿವಂಗತ ಡಾ. ವಿ. ಎಸ್. ಆಚಾರ್ಯ ಅವರು. ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳಿಂದ ಭಿನ್ನಾವಾಗಿ ವಿಶಿಷ್ಟವಾಗಿ ವಿಶ್ವವಿದ್ಯಾಲಯವನ್ನು ರೂಪಿಸುವ ಕನಸು ಕಟ್ಟಿ ವಿಶ್ವವಿದ್ಯಾಲಯ ಸ್ಥಾಪನಾ ಪ್ರಕ್ರಿಯೆಗೆ ತೀವ್ರ ಚಾಲನೆ ದೊರಕಿಸಿಕೊಟ್ಟವರು ಅವರು.
ಒಟ್ಟಿನಲ್ಲಿ ಜಗತ್ತಿನಲ್ಲಿಯೇ ಮೊಟ್ಟಮೊದಲ ಬಾರಿಗೆ ಜಾನಪದಕ್ಕಾಗಿಯೇ ಒಂದು ವಿಶ್ವವಿದ್ಯಾಲಯವನ್ನು ಸ್ಥಾಪಿಸಿದ ಕೀರ್ತಿ ಕರ್ನಾಟಕ ಸರ್ಕಾರದ್ದು. ಈ ವಿಶ್ವವಿದ್ಯಾಲಯ ಸಂಗೀತ, ಸಂಸ್ಕೃತ ಇವೇ ಮುಂತಾದ 'ವಿಷಯ' ವಿಶ್ವವಿದ್ಯಾಲಯಗಳ ಸಾಲಿನಲ್ಲಿ ಇವತ್ತಿನ ಸೇರ್ಪಡೆ. ಸಮುದಾಯ ಜ್ಞಾನದ ಮಹತ್ವವನ್ನು ಮನಗಂಡು ಸರ್ಕಾರ ಜಾನಪದ ವಿಷಯಕ್ಕೇ ಮೀಸಲಾದ ಸ್ವತಂತ್ರ ವಿಶ್ವವಿದ್ಯಾಲಯವೊಂದನ್ನು ಸ್ಥಾಪಿಸುವುದರ ಮೂಲಕ ಸಮುದಾಯ ಜ್ಞಾನದ ಸೆಲೆಯಾಗಿರುವ ಗ್ರಾಮೀಣ ರೈತರು, ರೈತ ಕಾರ್ಮಿಕರು, ದಲಿತರು, ಅಲೆಮಾರಿಗಳು, ಗುಡ್ಡಗಾಡು ಜನರು ಹಾಗೂ ಎಲ್ಲಾ ಶ್ರಮಜೀವಿಗಳ ಬದುಕು ಮತ್ತು ಸಂಸ್ಕೃತಿಗಳಿಗೆ ಮನ್ನಣೆ ನೀಡಿದೆ.
-ಪ್ರೊ.ಟಿ.ಎಂ.ಭಾಸ್ಕರ್
ಕುಲಪತಿ